ನಿಜಾಮಾಬಾದ್
	ಆಂಧ್ರ ಪ್ರದೇಶ ರಾಜ್ಯದ ವಾಯವ್ಯ ಭಾಗದಲ್ಲಿರುವ ಒಂದು ಜಿಲ್ಲೆ; ತಾಲ್ಲೂಕು; ಅವುಗಳ ಮುಖ್ಯಪಟ್ಟಣ. ನಿಜಾಮಾಬಾದ್ ಜಿಲ್ಲೆ ದಖನ್ ಪ್ರಸ್ಥಭೂಮಿಯಲ್ಲಿದೆ. ಉತ್ತರದಲ್ಲಿ ಗೋದಾವರಿ ನದಿ ಈ ಜಿಲ್ಲೆಯನ್ನು ಅದಿಲಾಬಾದ್ ಜಿಲ್ಲೆಯಿಂದಲೂ ಪಶ್ಚಿಮದಲ್ಲೆ ಗೋದಾವರಿಯ ಉಪನದಿಯಾದ ಮಂಜ್ರಾ ಇದನ್ನು ನಂದೇಡ್ ಜಿಲ್ಲೆಯಿಂದಲೂ ಬೇರ್ಪಡಿಸುತ್ತದೆ. ನೈಋತ್ಯದಲ್ಲಿ ಮಂಜ್ರಾ ನದಿಗೆ ಕಟ್ಟೆ ಕಟ್ಟಿ ನಿರ್ಮಿಸಲಾದ ನಿಜಾಮ್ ಸಾಗರ ಜಲಾಶಯವಿದೆ. ಜಿಲ್ಲೆಯ ಗುಡ್ಡಗಾಡಿನ ದೃಶ್ಯ ರಮಣೀಯವಾದ್ದು. ಇಲ್ಲಿಯ ವಾಯುಗುಣ ಉಷ್ಣ ಮತ್ತು ಸ್ವಲ್ಪಮಟ್ಟಿಗೆ ಆದ್ರ್ರ. ಇಲ್ಲಿ ವರ್ಷಕ್ಕೆ 1,143 ಮಿಮೀ. ಸರಾಸರಿ ಮಳೆಯಾಗುತ್ತದೆ. ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಚೌಬೀನೆಗೆ ಯೋಗ್ಯವಾದ ಮರ ದೊರಕುತ್ತದೆ. ಹುಲಿ, ಚಿರತೆ, ನರಿ ಕರಡಿ ಮತ್ತು ಕಾಡುಹಂದಿ ಇಲ್ಲಿಯ ವನ್ಯಮೃಗಗಳು. ಬತ್ತ ಮುಖ್ಯ ಬೆಳೆ. ಜೋಳ, ಗೋದಿ ಮತ್ತು ಕಬ್ಬು ಇತರ ಬೆಳೆಗಳು. ಜಿಲ್ಲೆಯ ವಿಸ್ತೀರ್ಣ 7,969 ಚ.ಕಿಮೀ. ಜನಸಂಖ್ಯೆ 13,13,268 (1971). ನಿಜಾಮಾಬಾದ್ (3,04,811), ಆರ್ಮೂಲ್ (2,98,140), ಕಾಮರೆಡ್ಡಿ (2,01,501), ಯೆಲ್ಲಾರೆಡ್ಡಿ (1,03,283), ಬನ್ಸ್‍ವಾಡಾ (1,24,715), ಮದ್ನೂರ್ (87,792) ಮತ್ತು ಬೋಧನ್ (1,93,026)- ಇವು ಇಲ್ಲಿಯ ತಾಲ್ಲೂಕುಗಳು.

	ನಿಜಾಮಾಬಾದ್ ನಗರ ಹೈದರಾಬಾದ್ ನಗರದ ವಾಯವ್ಯಕ್ಕೆ 144 ಕಿಮೀ. ದೂರದಲ್ಲಿ ಮಧ್ಯ ರೈಲ್ವೆಯ ಹೈದರಾಬಾದ್-ಗೋದಾವರಿ ಕಣಿವೆ ರೈಲುದಾರಿಯ ಮೇಲಿದೆ. ಇಲ್ಲಿ ಅನೇಕ ಮಾರ್ಗಗಳು ಕೂಡುತ್ತವೆ. ಹಿಂದೆ ಇದಕ್ಕೆ ಇಂದೂರ್ ಎಂಬ ಹೆಸರಿತ್ತು. ನಗರದ ನೈಋತ್ಯದಲ್ಲಿರುವ ಗುಡ್ಡದ ಮೇಲಿರುವ ದೇವಾಲಯ, ಇಂದೂರು ಕಿಲ್ಲೆ ಇವು ನೋಡತಕ್ಕ ಸ್ಥಳಗಳು. ನಿಜಾಮಾಬಾದಿನಲ್ಲಿ ಆಟ್ರ್ಸ್ ಮತ್ತು ವಿಜ್ಞಾನ ಕಾಲೇಜಿದೆ. ನಗರದ ಜನಸಂಖ್ಯೆ 1,15,640 (1971). ಪೌರ ಸಭೆಯೂ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯೂ ಇವೆ. ಅಕ್ಕಿಗಿರಣಿ, ಖಂಡಸಾರಿ ಸಕ್ಕರೆಯ ತಯಾರಿಕೆ, ಕಾಂಕ್ರೀಟ್ ಕೊಳವೆಗಳ ತಯಾರಿಕೆ-ಇಲ್ಲಿಯ ಕೈಗಾರಿಕೆಗಳು. ನಗರದ ಬಳಿ ಇರುವ ಯೆಲ್ಲಾರೆಡ್ಡಿ ಪೇಟೆಯಲ್ಲಿ ಸುಂದರವಾದ ಎರಡು ಪುರಾತನ ಜೈನ ದೇವಾಲಯಗಳಿವೆ.

	ನಿಜಾಮಾಬಾದಿನ ಪಶ್ಚಿಮಕ್ಕೆ 26 ಕಿಮೀ. ದೂರದಲ್ಲಿರುವ ಬೋಧನದಲ್ಲಿ ದೊಡ್ಡ ಸಕ್ಕರೆ ಮತ್ತು ಮದ್ಯಸಾರ ಕಾರ್ಖಾನೆಗಳಿವೆ. ಆಗ್ನೇಯದಲ್ಲಿರುವ ಕಾಮರೆಡ್ಡಿಯಲ್ಲೂ ಒಂದು ಮದ್ಯಸಾರ ಕಾರ್ಖಾನೆಯಿದೆ. ಉತ್ತರದಲ್ಲಿ ಆರ್ಮೂರ್ ಕೃತಕ ರೇಷ್ಮೆ ತಯಾರಿಕೆಗೆ ಹೆಸರಾದ್ದು. ಡಿಚ್‍ಪಳ್ಳಿಯಲ್ಲಿ ಒಂದು ವಿಷ್ಣು ದೇವಾಲಯವೂ, ಕುಷ್ಠರೋಗ ಚಿಕಿತ್ಸೆಗಾಗಿ ಒಂದು ಕ್ರೈಸ್ತ ಮಿಶನ್ ಆಸ್ಪತ್ರೆಯೂ ಇವೆ.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ